ಕಾಮದೇವ (ಕದಂಬರಾಜ)

 ಕದಂಬ ದೊರೆಗಳಲ್ಲೊಬ್ಬ. 12ನೆಯ ಶತಮಾನದಲ್ಲಿ ಹಾನಂಗಲ್ ಪ್ರದೇಶವನ್ನು ಆಳುತ್ತಿದ್ದ ರಾಜರಲ್ಲಿ ಪ್ರಮುಖ. ಇವನ ಆಳ್ವಿಕೆಯ ಕಾಲ 1181-1217. ಈತನ ತಂದೆ ಇಮ್ಮಡಿ ಕೀರ್ತಿನೃಪಾಲ. ಕದಂಬರ ಬಿರುದುಗಳಾದ ಮಾಲತೀ ಮಧುಕೇಶ್ವರ, ಬನವಾಸಿ ಪುರವರಾಧೀಶ್ವರ ಎಂಬವನ್ನು ಕಾಮದೇವ ತಳೆದಿದ್ದ. ಕಾಳಲದೇವಿ ಈತನ ರಾಣಿ. ಬರಮ, ಸೋಮ ಮತ್ತು ಮಲ್ಲಿದೇವ ಇವರ ಗಂಡು ಮಕ್ಕಳು. ತನ್ನ ಆಳ್ವಿಕೆಯ ಪ್ರಾರಂಭದಲ್ಲಿ ಕಾಮದೇವ ಕಳಚುರಿ ಸಾಮ್ರಾಟರ  ಅಧೀನನಾಗಿದ್ದ. 1184ರಲ್ಲಿ ಕಳಚುರಿ ಮನೆತನ ಕೊನೆಗೊಂಡು ನಾಲ್ಮಡಿ ಸೋಮೇಶ್ವರ ಚಾಳುಕ್ಯ ಮನೆತನವನ್ನು ಪುನಃ ಸ್ಥಾಪಿಸಿದ ಮೇಲೆ ಅವರ ಅಧೀನನಾಗಿದ್ದ. ಕಲ್ಯಾಣವನ್ನು ಕಳಚುರಿಗಳಿಂದ ಮರಳಿ ಪಡೆಯುವ ಪ್ರಯತ್ನದಲ್ಲಿ ಸೋಮೇಶ್ವರನಿಗೆ ಕಾಮದೇವನ ಸಹಕಾರ ದೊರಕಿತು. 1189ರಲ್ಲಿ ಚಾಳುಕ್ಯ ಮನೆತನ ಅಳಿದು ಹೊಯ್ಸಳ ವೀರಬಲ್ಲಾಳ ಬನವಾಸಿ, ಹಾನಂಗಲ್, ನಾಗರಖಂಡ ನಾಡುಗಳನ್ನು ಗೆದ್ದು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ. ಕಾಮದೇವ ಹಲವು ವರ್ಷಗಳ ಕಾಲ ವೀರಬಲ್ಲಾಳ ಚಕ್ರವರ್ತಿಯ ಅಧೀನನಾಗಿದ್ದ. ಈತ 1205ರ ವೇಳೆಗೆ ಸ್ವತಂತ್ರ ರಾಜನೆಂದು ಘೋಷಿಸಿಕೊಂಡುದರಿಂದ ಬಲ್ಲಾಳನ ಸೈನ್ಯ ಇವನನ್ನು ಅನೇಕ ಬಾರಿ ಸೋಲಿಸಿತು. ಸೋತಾಗಲೆಲ್ಲ ಈತ ತಲೆತಪ್ಪಿಸಿಕೊಂಡು ಮರಸು ಯುದ್ಧದಲ್ಲಿ ತೊಡಗುತ್ತಿದ್ದ. ಕೊನೆಗೆ 1211ರ ವೇಳೆಗೆ ಕಾಮದೇವ ಸ್ವತಂತ್ರನಾದ. ಆದರೆ ಹಾನಂಗಲ್ ಕದಂಬರ ಸ್ವಾತಂತ್ರ್ಯ ಮುಂದುವರಿಯಲಿಲ್ಲ. ಇವನ ಉತ್ತರಾಧಿಕಾರಿ ಮಲ್ಲಿದೇವ ಸೇವುಣರ ಸಾಮಂತನಾದ. ಕಾಮದೇವ ಕಬ್ಬಿಗರ ಕಾವ್ಯದ ಕರ್ತೃವಾದ ಆಂಡಯ್ಯನ ಪೋಷಕನಾಗಿದ್ದನೆಂದು ಕಾಣುತ್ತದೆ.    

(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ